ಇಂಗ್ಲಿಷ್ ಸಾಹಿತ್ಯ ಚರಿತ್ರೆಯ ಮಧ್ಯಯುಗದ ಅವಧಿ ಸು. 1066-1500ರ ವರೆಗೆ ಎಂದು ಇಟ್ಟುಕೊಳ್ಳಬಹುದು. ನಾರ್ಮನ್ನರು ಇಂಗ್ಲೆಂಡಿಗೆ ಮುತ್ತಿಗೆ ಹಾಕಿ ಗೆದ್ದು ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ್ದು 1066ರಲ್ಲಿ. ಆದರೆ ಅದಕ್ಕೆ ಸ್ವಲ್ಪ ಮೊದಲೇ ಇಂಗ್ಲೆಂಡಿನಲ್ಲಿ ನಾರ್ಮನ್ನರ ಪ್ರಭಾವ ಆರಂಭವಾಗಿತ್ತೆಂದು ಹೇಳಬಹುದು. ಅದರೊಡನೆ ಇಂಗ್ಲಿಷ್ ಸಾಹಿತ್ಯಕ್ಕೆ ಅದರಲ್ಲಿ ಅದುವರೆಗೂ ಇಲ್ಲದಿದ್ದ ಕೆಲವು ಲಕ್ಷಣಗಳು ಬಂದುವು. ಆ್ಯಂಗ್ಲೊಸ್ಯಾಕ್ಸನರ ಕಾವ್ಯದಲ್ಲಿ ಹಗುರವೂ ಹರ್ಷಮಯವೂ ಆದ ಕವಿತೆಯಿರಲಿಲ್ಲ. ಅವರು ಗಂಭೀರ ಸ್ವಭಾವದ ವೀರರು. ಲವಲವಿಕೆಯಿಂದ ಕೂಡಿದ ಜೀವನ, ಬಣ್ಣ ಬಣ್ಣದ ಪ್ರಕೃತಿ ಚಿತ್ರಗಳು, ಪ್ರಣಯಗೀತೆಗಳು, ನೃತ್ಯಗೀತೆಗಳು-ಮೊದಲಾದುವು ಇಂಗ್ಲೆಂಡಿಗಿಂತಲೂ ಹೆಚ್ಚು ಪ್ರಕಾಶಯುತವಾದ ವಾಯುಗುಣವುಳ್ಳ ಫ್ರಾನ್ಸಿನಿಂದ ಇಂಗ್ಲಿಷ್ ಸಾಹಿತ್ಯ ಪ್ರಪಂಚಕ್ಕೆ ಬಂದವು. ಆ್ಯಂಗ್ಲೊ ಸ್ಯಾಕ್ಸನರಿಗಿಂತಲೂ ಹಿಂದೆ ಬ್ರಿಟನ್ನಿನಲ್ಲಿದ್ದ ಕೆಲ್ಟರ ಐತಿಹ್ಯಗಳನ್ನು ಸಂಗ್ರಹಿಸಿ ಬರೆದಿಟ್ಟವರೂ ನಾರ್ಮನ್ನರೇ. ಆರ್ಥರ್ ದೊರೆಯ ಮತ್ತು ಅವನ ಯೋಧರ ಸ್ವಾರಸ್ಯಮಯ ಕಥೆಗಳು ಈ ಕಾಲದಲ್ಲಿ ರೂಪಿತವಾದವು. ಇಂಗ್ಲೆಂಡಿನ ರಾಷ್ಟ್ರೀಯ ಐತಿಹ್ಯಗಳೆನ್ನಬಹುದಾದ ಈ ಕಥೆಗಳು ಇಂಗ್ಲಿಷ್ ಕವಿಗಳನ್ನು ಮತ್ತೆ ಮತ್ತೆ ಆಕರ್ಷಿಸಿವೆ. ಇದೇ ರೀತಿ ಇತರ ವೀರರ ಕಥೆಗಳನ್ನೂ ಪದ್ಯರೂಪದಲ್ಲಿ ನಿರೂಪಿಸುವ ಕಲೆಯನ್ನು ನಾರ್ಮನ್ನರು ಬೆಳೆಸಿಕೊಂಡಿದ್ದರು. ಮೆಟ್ರಿಕಲ್ ಕ್ರಾನಿಕಲ್ಸ್, ಮೆಟ್ರಿಕಲ್ ರೊಮಾನ್ಸಸ್ ಎಂದು ಹೆಸರು ಪಡೆದಿರುವ ಇಂಥ ವೀರಗವಿತೆಗಳನೇಕವು ಈ ಯುಗದ ಮೊದಲ ಭಾಗದಲ್ಲಿ ರಚಿತವಾದವು. ಇವಲ್ಲದೆ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ಕೃತಿಗಳೂ ವೈಯಕ್ತಿಕ ಭಾವಗಳನ್ನು ವ್ಯಕ್ತಪಡಿಸುವ ಕಾವ್ಯಗಳೂ ಕೆಲವು ಬಂದವು. ದಿ ಔಲ್ ಅಂಡ್ ದಿ ನೈಟಿಂಗೇಲ್, ದಿ ಕುಕು ಸಾಂಗ್, ಆಲಿಸಾನ್-ಇಂಥ ಕವಿತೆಗಳು. ಆದರೆ ಮಧ್ಯಯುಗದ ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯುತ್ತಮವೆಂದು ಖ್ಯಾತಿವೆತ್ತಿರುವ ಕವನ ದಿ ಪರ್ಲ್ ಜೀವನದ ಅಶಾಶ್ವತತೆ, ಸಹನೆಯ ಅಗತ್ಯ, ಆತ್ಮದ ಅಮತರ್ಯ್ತೆ, ಮರಣಾನಂತರದ ಜೀವನ-ಇವೆಲ್ಲವುಗಳೂ ಇದರಲ್ಲಿ ಸೂಚ್ಯರೀತಿಯಲ್ಲಿ ಪ್ರತಿಪಾದಿತವಾಗಿರುವುದಲ್ಲದೆ ಮಗಳ ಮರಣದಿಂದ ತಂದೆಯೊಬ್ಬ ಅನುಭವಿಸುವ ಸಹಜಸಂಕಟದ ಅಭಿವ್ಯಕ್ತಿಯೂ ಇದೆ. ಈ ಕಾಲದಲ್ಲೇ ರಚಿತವಾದ ದಿ ಹ್ಯಾರೋಯಿಂಗ್ ಆಫ್ ಹೆಲ್ ಎಂಬುದು ಬೈಬಲ್ ಕಥೆಗಳನ್ನು ಕಾವ್ಯರೂಪದಲ್ಲಿ ನಿರೂಪಿಸುವ ಕೃತಿಗಳಿಗೆ ಪ್ರತಿನಿಧಿಯಾಗಿದೆ. ಕ್ರೈಸ್ತಮತ ಹೇಗೆ ಇಂಗ್ಲೆಂಡಿನಲ್ಲೆಲ್ಲ ಹಬ್ಬಿ ಜನಮನ್ನಣೆ ಪಡೆದಿದ್ದಿತೆಂಬುದಕ್ಕೆ ಈ ಬಗೆಯ ಕವನಗಳು ಸಾಕ್ಷಿಗಳಾಗಿವೆ. ನಾರ್ಮನ್ನರಿಂದ ಇಂಗ್ಲಿಷ್ ಸಾಹಿತ್ಯಕ್ಕೆ ಆದ ಉಪಕಾರ ಇಷ್ಟಕ್ಕೇ ಮುಗಿಯಲಿಲ್ಲ. ಮೂರು ಶತಮಾನಗಳ ಕಾಲ ಫ್ರ್ರೆಂಚ್ ಭಾಷೆಯ ಪ್ರಭುತ್ವದ ಪರಿಣಾಮವಾಗಿ ಸಾವಿರಾರು ಫ್ರೆಂಚ್ ಪದಗಳು ಇಂಗ್ಲಿಷಿಗೆ ಬಂದು ಅದರ ಶಬ್ದಸಮೂಹವನ್ನೂ ವೈವಿಧ್ಯವನ್ನೂ ಶಕ್ತಿಯನ್ನೂ ಹೆಚ್ಚಿಸಿದವು. ಇದಲ್ಲದೆ ಹೊಸರೀತಿಯ ಛಂದಸ್ಸೂ ಫ್ರ್ರೆಂಚಿನಿಂದ ಇಂಗ್ಲಿಷಿಗೆ ಬಂದಿತು. ಆ್ಯಂಗ್ಲೋಸ್ಯಾಕ್ಸನ್ ಛಂದಸ್ಸಿನ ಆಧಾರ ಆದ್ಯಕ್ಷರ ಪ್ರಾಸವುಳ್ಳ ಎರಡು ಮೂರು ಪದಗಳು ಪಂಕ್ತಿಯ ಮೊದಲರ್ಧದಲ್ಲೂ ಮತ್ತೆ ಅಷ್ಟೇ ಪದಗಳು ಎರಡನೆಯ ಭಾಗದಲ್ಲೂ ಇರಬೇಕೆನ್ನುವುದು ಆ ಕಾವ್ಯದ ಸಂಪ್ರದಾಯವಾಗಿತ್ತು. ಈಗ ಇಂಗ್ಲಿಷಿನಲ್ಲಿ ಬಳಕೆಯಲ್ಲಿರುವ ಪದಗಳ ಧ್ವನಿಯ ಒತ್ತಡವನ್ನು ಅನುಸರಿಸಿದ ಛಂದಸ್ಸನ್ನು ರೂಪಿಸುವ ಕ್ರಮ ಫ್ರ್ರೆಂಚ್ ಕಾವ್ಯದಿಂದ ಇಂಗ್ಲಿಷಿಗೆ ದತ್ತವಾದುದು. ಇದರಿಂದ ಇಂಗ್ಲಿಷ್ ಕಾವ್ಯ ಛಂದೋವೈವಿಧ್ಯವನ್ನೂ ನಾದಮಾಧುರ್ಯವನ್ನೂ ಪಡೆಯಲು ಸಾಧ್ಯವಾಯಿತು. ವಾಸ್ತವವಾಗಿ ಎಷ್ಟೋ ಫ್ರೆಂಚ್ ಛಂದಸ್ಸುಗಳೇ ಇಂಗ್ಲಿಷಿನಲ್ಲೂ ಬಳಕೆಗೆ ಬಂದುವು. ಇಂಗ್ಲೆಂಡಿನ ಹಿರಿಯ ಕವಿಗಳಲ್ಲಿ ಪ್ರಥಮನಾದ ಛಾಸರನೇ ಅವುಗಳಲ್ಲಿ ಕೆಲವನ್ನು ಫ್ರ್ರೆಂಚಿನಿಂದ ಇಂಗ್ಲಿಷಿಗೆ ತಂದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ